ಕಂಪ್ಲಿಯಲ್ಲಿ ಕೃಷ್ಣ–ರಾಧೆ ವೇಷಭೂಷಣ ಸ್ಪರ್ಧೆ
ಕಂಪ್ಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಅಕ್ಷತಾ ಫ್ಲವರ್ ಸ್ಟಾಲ್ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ–ರಾಧೆ ವೇಷಭೂಷಣ ಸ್ಪರ್ಧೆಯನ್ನು ಕಂಪ್ಲಿಯ ಸಂಗಾತ್ರಯ ಪಾಠಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸು ಹೂವಿನಂತೆ ನಿರ್ಮಲವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬೆಳೆಸಬೇಕು. ಇತಿಹಾಸ ಹಾಗೂ ಪೌರಾಣಿಕ ಪಾತ್ರಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಇಂತಹ ವೇಷಭೂಷಣ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ದಾರಿ ತೋರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಆಚಾರ–ವಿಚಾರಗಳನ್ನು ಕಲಿಸಿದಾಗ ಮಾತ್ರ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕೃಷ್ಣನ ಜೀವನ ಹಾಗೂ ಆದರ್ಶಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ರಾಧಾ–ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಸಹಸ್ರ ಲಕ್ಷ್ಮಿ ಪ್ರಥಮ, ನಂದನ್ ದ್ವಿತೀಯ, ಗಿಪ್ಲಾ ತೃತೀಯ ಹಾಗೂ ಇಷಾ ನಾಲ್ಕನೇ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಘನಮಠ ಸ್ವಾಮಿ, ಜನಜಾಗೃತಿ ಉಪಾಧ್ಯಕ್ಷೆ ಮಹೇಶ್ವರಿ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ. ಶಾರದಾ ಹಿರೇಮಠ, ಸಹಕಾರ್ಯದರ್ಶಿ ಬಿ.ಎಂ. ಪುಷ್ಪಾ, ಒಕ್ಕೂಟದ ಅಧ್ಯಕ್ಷೆ ನಿರ್ಮಲಾ, ನಿರ್ಣಾಯಕರಾದ ಬನಶಂಕರಿ ಹಾಗೂ ಶಿಲ್ಪ ದರೋಜಿ, ಸಮನ್ವಯಾಧಿಕಾರಿ ಮಂಜುಳಾ, ಮೇಲ್ವಿಚಾರಕಿ ಮಂಜುಳಾ, ಕೃಷಿ ಅಧಿಕಾರಿ ಸಂಜೀವಕುಮಾರ ಸೇರಿದಂತೆ ಸೇವಾ ಪ್ರತಿನಿಧಿಗಳು, ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.
