ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಆಚರಣೆ
ಕಂಪ್ಲಿ: ಪಟ್ಟಣದ ಸೋಮಪ್ಪನ ಕೆರೆಯ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಭಾರತೀಯ ಗ್ರಂಥಾಲಯ ಚಳುವಳಿಯ ಪಿತಾಮಹರಾದ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರ, ಡಾ. ಎಸ್.ಆರ್. ರಂಗನಾಥನ್ ಅವರ ಬಾಲ್ಯ ಜೀವನ, ಸೇವೆ ಹಾಗೂ ಸಾಧನೆಗಳ ಕುರಿತು ವಿವರಿಸಿದರು. 1892ರ ಆಗಸ್ಟ್ 12ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಸಿಯಾಳಿ ಗ್ರಾಮದಲ್ಲಿ ಜನಿಸಿದ ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠ ಸಾಹಿತ್ಯವನ್ನು ಸೃಷ್ಟಿಸಿ ಭಾರತಕ್ಕೆ ಅಂತರರಾಷ್ಟ್ರೀಯ ಕೀರ್ತಿಯನ್ನು ತಂದಿದ್ದಾರೆ ಎಂದು ತಿಳಿಸಿದರು. ಅವರ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ನಿವೃತ್ತ ಪಶು ವೈದ್ಯಾಧಿಕಾರಿ ದತ್ತಾತ್ರೇಯ ಶೆಟ್ಟಿ ಮಾತನಾಡಿ, ಸಾರ್ವಜನಿಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಜೀವನದಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಎಲ್ಲರೂ ಗ್ರಂಥಾಲಯದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಂಥಾಲಯ ಸಿಬ್ಬಂದಿ ಹೆಚ್. ಪ್ರಹ್ಲಾದ ನಾಯಕ ಮಾತನಾಡಿ, ಮಕ್ಕಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಸದಸ್ಯತ್ವ ಪಡೆದು ನಿರಂತರ ಓದುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನವನ ಪಾಟೀಲ್, ಜಯರಾಜ್ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು.
