ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ
ಕಂಪ್ಲಿ, ಆ. 11: ರಜಪೂತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಂಪ್ಲಿ ರಜಪೂತ ಸಮಾಜದ ವತಿಯಿಂದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಜಪೂತ ಸಮಾಜದ ತಾಲೂಕು ಅಧ್ಯಕ್ಷ ಕೆ. ಇಂದ್ರಜಿತ್ ಸಿಂಗ್ ಮಾತನಾಡಿ, ರಾಜ್ಯದ ರಜಪೂತ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ರಜಪೂತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದೆ ಎಂದು ತಿಳಿಸಿದರು.
ಈ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಜೊತೆಗೆ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರ ಗಮನಕ್ಕೂ ವಿಷಯವನ್ನು ತಂದು ನಿಗಮ ಸ್ಥಾಪನೆಗೆ ಒತ್ತಾಯಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಲಕ್ಷ್ಮಣ ಸಿಂಗ್, ಜಮನ್ ಸಿಂಗ್, ಗೋವರ್ಧನ್ ಸಿಂಗ್, ವಿನಯ್ ಸಿಂಗ್, ಪೃಥ್ವಿರಾಜ್ ಸಿಂಗ್ ಸೇರಿದಂತೆ ರಜಪೂತ ಸಮುದಾಯದ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.
